ರಾಜ್ಯದಲ್ಲಿ ಪ್ರತ್ಯೇಕ ಮದ್ರಸ ಪಠ್ಯಪುಸ್ತಕ ರಚನೆ: ಸರಕಾರದಿಂದ ಪರಿಶೀಲನೆ

ಮಂಗಳೂರು: ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಮದ್ರಸ ವಿದ್ಯಾಭ್ಯಾಸ ಪಠ್ಯಕ್ರಮವನ್ನು ರಚಿಸುವ ಕುರಿತಂತೆ ಪರಿಶೀಲಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಅಬ್ಬಾಸ್ ಶರೀಫ್ ತಿಳಿಸಿದ್ದಾರೆ.
ಅಲ್ಲದೆ ಕರಾವಳಿ ಭಾಗದಲ್ಲಿ ಮದ್ರಸಗಳಲ್ಲಿ ಯಾವ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಉಂಟಾಗುತ್ತಿರುವ ಗೊಂದಲಗಳ ಕುರಿತಂತೆ ಚರ್ಚಿಸಲು ಇಲ್ಲಿನ ಎಲ್ಲಾ ಮದ್ರಸ ಆಡಳಿತ ಮಂಡಳಿಗಳ ಸಭೆ ಕರೆಯಲು ಸರಕಾರ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರಾವಳಿ ಮತ್ತು ಸುತ್ತಮುತ್ತ ಜಿಲ್ಲೆಗಳಲ್ಲಿರುವ ಬ್ಯಾರಿ ಮಾತೃ ಭಾಷೆ ಹೊಂದಿರುವ ಸುನ್ನಿ ಅಹ್ಲ್ ಸುನ್ನತ್ ವಲ್ ಜಮಾಅತ್‌ನ ಶಾಫಿ ಪಂಗಡವು ತಮ್ಮ ಮಕ್ಕಳ ಧಾರ್ಮಿಕ ಶಿಕ್ಷಣಕ್ಕೆ ಕೇರಳ ಮೂಲದ ಎರಡು ವಿದ್ಯಾಭ್ಯಾಸ ಮಂಡಳಿಯ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳುತ್ತಿವೆ. ಇದರಲ್ಲಿ ಯಾವ ಮಂಡಳಿಯ ಪಠ್ಯಪುಸ್ತಕಗಳನ್ನು ಅಳವಡಿಸಬೇಕು ಎಂಬುದರ ಬಗ್ಗೆ ಈ ಪ್ರದೇಶ ಗಳಲ್ಲಿ ಘರ್ಷಣೆಗಳು ಕೂಡಾ ನಡೆಯುವುದಿದೆ. ಇದು ಸಾಮಾಜಿಕ ಶಾಂತಿ ಭಂಗಕ್ಕೆ ಕಾರಣ ವಾಗುತ್ತಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.
ಅಲ್ಲದೇ ಈ ಭಾಗದ ಮದ್ರಸಗಳು ಸದ್ಯ 2011ರ ಆಗಸ್ಟ್ 31ರಂದು ಅಳವಡಿಸಿಕೊಂಡು ಬಂದಿರುವ ಪಠ್ಯಪುಸ್ತಕವನ್ನೇ ಮುಂದುವರಿಸಿಕೊಂಡು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಎಲ್ಲಾ ಮದ್ರಸ ಆಡಳಿತ ಮಂಡಳಿಗಳಿಗೆ ಅವರು ಪ್ರಕಟನೆಯಲ್ಲಿ ಸೂಚಿಸಿದ್ದಾರೆ.
No comments:
Post a Comment