ಮಸ್ಕತ್, ಅ.9: ಒಮಾನ್‌ನಲ್ಲಿ ನೆಲೆಸಿರುವ ಕೇರಳಿಗರು ಇನ್ನು ಮುಂದೆ ಕಾನೂನು ದಾವೆಯನ್ನು ಹೂಡಲು ಭಾರತಕ್ಕೆ ಪ್ರಯಾಣಿಸಬೇಕಾದ ಅಗತ್ಯವಿಲ್ಲ. ಅವರು ಕೊಲ್ಲಿ ರಾಷ್ಟ್ರವನ್ನು ತೊರೆಯದೆ ಅಲ್ಲಿಂದಲೇ ಭಾರತದಲ್ಲಿನ ನ್ಯಾಯಾಲಯ ದಲ್ಲಿ ಪ್ರಕರಣ ದಾಖಲಿಸಬಹುದಾಗಿದೆ. ಒಮಾನ್‌ನಲ್ಲಿರುವ ರಜಬ್ ಅಲ್ ಖಾದಿರಿ ಆ್ಯಂಡ್ ಅಸೋಸಿಯೇಟ್ಸ್ ಎಂಬ ಕಾನೂನು ಸಂಸ್ಥೆಯೊಂದು ಈ ಸಂಬಂಧ ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿನ ಕಾನೂನು ತಜ್ಞರ ನೆರವನ್ನು ಪಡೆಯಲಿದೆ. ಇದರಿಂದಾಗಿ ಅನಿವಾಸಿ ಭಾರತೀಯರು ಹಾಗೂ ಒಮಾನ್‌ನ ಜನರಿಗೆ ಯಾವುದೇ ಸಮಸ್ಯೆಯಿಲ್ಲದೆ ಭಾರತದಲ್ಲಿ ಕಾನೂನು ವಿವಾದಗಳನ್ನು ನಿಭಾಯಿಸಲು ಸಾಧ್ಯವಾಗಲಿದೆ ಎಂದು ‘ಟೈಮ್ಸ್ ಆಫ್ ಒಮಾನ್’ ವರದಿ ಮಾಡಿದೆ.
‘‘ಒಂದು ವೇಳೆ ಅನಿವಾಸಿ ಭಾರತೀಯನೊಬ್ಬನು ಭಾರತೀಯ ಸರ್ವೋಚ್ಚ ನ್ಯಾಯಾಲಯ ಅಥವಾ ಕೇರಳ ದಲ್ಲಿರುವ ಯಾವುದೇ ನ್ಯಾಯಾಲಯದಲ್ಲಿ ದಾವೆ ಹೂಡ ಬೇಕಾದಲ್ಲಿ, ಅದಕ್ಕಾಗಿ ಆತನು ಭಾರತಕ್ಕೆ ಪ್ರವಾಸ ಕೈಗೊಳ್ಳ ಬೇಕಾದ ಅಗತ್ಯವಿಲ್ಲ. ಭಾರತದಲ್ಲಿರುವ ನಮ್ಮ ಸಹಾಯಕರು ಕಕ್ಷಿದಾರರಿಗೆ ಈ ನಿಟ್ಟಿನಲ್ಲಿ ಸೂಕ್ತ ಸೇವೆಯನ್ನು ಒದಗಿಸಲಿದ್ದಾರೆ.
ಪತ್ರವ್ಯವಹಾರಗಳನ್ನು ನಡೆಸುವುದಕ್ಕಾಗಿ ಕಕ್ಷಿದಾರರು ಭಾರತಕ್ಕೆ ಪ್ರಯಾಣಿಸಬೇಕಾದ ಅಗತ್ಯವಿಲ್ಲ’’ ಎಂದು ರಜಬ್ ಅಲ್ ಖಾದಿರಿ ಆ್ಯಂಡ್ ಅಸೋಸಿಯೇಟ್ಸ್‌ನ ಕಾನೂನು ಸಲಹೆಗಾರ ಸೆಬಾಸ್ಟಿಯನ್ ಕೆ. ಜೋಸ್ ವಿವರಿಸಿದ್ದಾರೆ. ಈ ನೂತನ ವ್ಯವಸ್ಥೆಯು ಇಂದಿನಿಂದ ಜಾರಿಗೆ ಬರಲಿದೆ. ‘‘ಒಮಾನ್‌ನ ನಾಗರಿಕರಿಗೂ ಕಾನೂನು ಸಂಸ್ಥೆ ನೆರವಾಗಲಿದೆ. ಒಂದು ವೇಳೆ ಒಮಾನ್‌ನ ಪ್ರಾಯೋಜಕರು ಭಾರತದಲ್ಲಿ ಪ್ರಕರಣ ದಾಖಲಿಸಬೇಕಾದಲ್ಲಿ ನಾವು ಅವರಿಗೆ ನೆರವು ನೀಡಲು ಸಾಧ್ಯವಿದೆ’’ ಎಂದೂ ಅವರು ತಿಳಿಸಿದ್ದಾರೆ.
No comments:
Post a Comment