ಅಹ್ಮದಾಬಾದ್: ಅಮಾನತ್ತಿನಲ್ಲಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಇಂದು ಜಾಮೀನು ಬಿಡುಗಡೆಗೊಂಡು, ಸಬರಮತಿ ಜೈಲಿನಿಂದ ಹೊರಬರುತ್ತಿದ್ದಂತೆಯೇ ನರೇಂದ್ರ ಮೋದಿ ವಿರುದ್ಧ ತಮ್ಮ ಟೀಕಾ ಪ್ರಹಾರವನ್ನು ಆರಂಭಿಸಿದ್ದಾರೆ. ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿರಬಹುದು ಆದರೆ ಗಲಭೆ ಪ್ರಕರಣಗಳ ವಿಷಯದಲ್ಲಿ ಅವರೊಬ್ಬ ಪಕ್ಕಾ ಕ್ರಿಮಿನಲ್ ಆಗಿದ್ದಾರೆಂದು ಅವರು ಕಿಡಿಗಾರಿದ್ದಾರೆ. ರಾಷ್ಟ್ರೀಯ ಸುದ್ದಿವಾಹಿನಿ ಯೊಂದಕ್ಕೆ ಸಂದರ್ಶನ ನೀಡಿದ ಅವರು, ಮೋದಿಯನ್ನು ಕ್ರಿಮಿನಲ್‌ನಂತೆ ಪರಿಗಣಿಸಬೇಕು ಹಾಗೂ ಅವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
2002ರ ಗುಜರಾತ್ ಗಲಭೆಗಳಲ್ಲಿ ಮೋದಿಯ ಕೈವಾಡವಿತ್ತೆಂಬುದನ್ನು ಸಾಬೀತು ಪಡಿಸಲು ಹೇರಳವಾದ ಸಾಕ್ಷಾಧಾರಗಳಿದ್ದು, ಅವೆಲ್ಲವೂ ಬಹಿರಂಗಗೊಳ್ಳಲಿವೆ ಎಂದವರು ಹೇಳಿದರು. ತನ್ನ ವಿರುದ್ಧ ಗುಜರಾತ್ ಪೊಲೀಸರು ಹೊರಿಸಿರುವ ಆರೋಪಗಳನ್ನು ನಿರಾಕರಿಸಿದ ಭಟ್, ‘‘ನಾನು ಏನೆಲ್ಲ ಮಾಡಿರುವೆನೋ, ಅವೆಲ್ಲವೂ ನನ್ನ ಕರ್ತವ್ಯದ ಭಾಗವಾಗಿದ್ದವು. ಆ ಬಗ್ಗೆ ನನಗೆ ಹೆಮ್ಮೆಯಿದೆಯೇ ಹೊರತು, ಅದನ್ನು ನನ್ನ ತಲೆಯ ಮೇಲೆ ನೇತಾಡುತ್ತಿರುವ ತೂಗುಗತ್ತಿಯೆಂದು ಪರಿಗಣಿಸುವುದಿಲ್ಲ’’ಎಂದು ಹೇಳಿದರು. ಗುಜರಾತ್‌ನಲ್ಲಿಯೇ ತಾನು ನೆಲೆಸಲು ಬಯಸುತ್ತಿದ್ದು, ನ್ಯಾಯಕ್ಕಾಗಿ ತಾನು ನಡೆಸುತ್ತಿರುವ ಹೋರಾಟ ತಾರ್ಕಿಕ ಅಂತ್ಯವನ್ನು ತಲುಪಿದೆಯೆಂದರು.
ತನ್ನ ವಿರುದ್ಧ ದೂರು ದಾಖಲಿಸಿರುವ ಪೊಲೀಸ್ ಕಾನ್ಸ್‌ಟೇಬಲ್ ಕೆ.ಡಿ.ಪಂತ್ ಒಂದು ದೊಡ್ಡ ಚದುರಂಗದಾಟದ ದಾಳವಾಗಿದ್ದಾರೆಂದು ಭಟ್ ಹೇಳಿದರು. ‘‘ನಾನು ನಡೆಸುತ್ತಿರುವ ಸಮರವು ಸುದೀರ್ಘವಾಗಿದ್ದು, ಜಗತ್ತಿನಲ್ಲಿ ಎಲ್ಲಿಯೂ ಸಹ ನ್ಯಾಯ ಸುಲಭವಾಗಿ ದೊರೆತ ನಿದರ್ಶನಗಳಿಲ್ಲ’’ ಎಂದರು.
No comments:
Post a Comment