27ರಂದು ಸಮಸ್ತ ಸಮ್ಮೇಳನ ಮಂಗಳೂರು ನೆಹರೂ ಮೈದಾನದಲ್ಲಿ
ಮಂಗಳೂರು, ಮಾ.24: ಸಮಸ್ತ ಕೇರಳ ಜಂಮಿಯತುಲ್ ಉಲಮಾ ವತಿ ಯಿಂದ ಸಮಸ್ತ ಸುನ್ನಿ ಮಹಾ ಸಮ್ಮೇಳನವು ಮಾ.27ರಂದು ನೆಹರೂ ಮೈದಾನದಲ್ಲಿ ನಡೆಯಲಿದೆ ಎಂದು ಅಬ್ದುಲ್ ಅಝೀಝ್ ದಾರಿಮಿ ಕಲ್ಲೇಗ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.‘ವರಕ್ಕಲ್ ಮುಲ್ಲಕೋಯ ತಂಙಳ್ ಹಾದಿಯಲ್ಲಿ ಪಾರಂಪರ್ಯದ ಉಳಿವು ಸಮಸ್ತದ ನಿಲುವು’ ಎಂಬ ಘೋಷಣೆಯೊಂದಿಗೆ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಉಲಮಾ ಸಮ್ಮೇಳನ ಹಾಗೂ ಸಂಜೆ 4:30ಕ್ಕೆ ಸಾರ್ವಜನಿಕ ಸುನ್ನಿ ಮಹಾ ಸಮ್ಮೇಳನ ನಡೆಯಲಿದೆ.
ದ.ಕ. ಜಿಲ್ಲಾ ಖಾಝಿ ತ್ವಾಕ ಉಸ್ತಾದ್‌ರ ನೇತೃತ್ವದಲ್ಲಿ ಬೆಳಗ್ಗೆ 8:30ಕ್ಕೆ ಕೇಂದ್ರ ಮಸೀದಿ ಸಮೀಪದ ಮುಹಮ್ಮದ್ ವೌಲಾ ಜಲಾಲ್ ಮಸ್ತಾನ್ ಅಲ್ ಬುಖಾರಿಯವರ ದರ್ಗಾ ಝಿಯಾರತ್‌ನೊಂದಿಗೆ ಕಾರ್ಯಕ್ರಮ ಆರಂಭ ಗೊಳ್ಳಲಿದೆ. 9:30ಕ್ಕೆ ನೆಹರೂ ಮೈದಾನದಲ್ಲಿ ಅತ್ರಾಡಿ ಖಾಝಿ ವಿ.ಕೆ. ಅಬೂಬಕರ್ ಮುಸ್ಲಿಯಾರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ‘ಅಹ್ಲುಸ್ಸುನ್ನತಿ ವಲ್ ಜಮಾಅ’ ಎಂಬ ವಿಷಯದಲ್ಲಿ ಪ್ರಥಮ ಅಧ್ಯಯನ ಶಿಬಿರ ನಡೆಯಲಿದ್ದು, ಸಮಸ್ತದ ಫತ್ವಾ ಸಮಿತಿ ಸದಸ್ಯ ಎಂ.ಟಿ.ಉಸ್ತಾದ್ ಅಧ್ಯಕ್ಷತೆಯಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯ ಮಿತ್ತಬೈಲ್ ಉಸ್ತಾದ್ ಉದ್ಘಾಟನೆ ಮಾಡಲಿದ್ದಾರೆ.
ಸಮಸ್ತದ ಪ್ರಧಾನ ಕಾರ್ಯದರ್ಶಿ ಚೆರುಶ್ಶೇರಿ ಉಸ್ತಾದ್ ವಿಷಯ ಮಂಡಿಸಲಿದ್ದಾರೆ. ಅಪರಾಹ್ಣ 2 ಗಂಟೆಗೆ ನಡೆಯುವ ದ್ವಿತೀಯ ಅಧ್ಯಯನ ಶಿಬಿರದಲ್ಲಿ ಕಾಞಂಗಾಡ್ ಸಂಯುಕ್ತ ಖಾಝಿ ಜಿಫ್ರಿ ಮುತ್ತ್ತುಕೋಯ ತಂಙಳ್ ಉಲಮಾಗಳ ಭಾದ್ಯತೆ ಕುರಿತು ವಿಷಯ ಮಂಡಿಸಲಿದ್ದಾರೆ. ಸಂಜೆ 4:30ಕ್ಕೆ ದ.ಕ.ಜಿಲ್ಲಾ ಖಾಝಿ ತ್ವಾಕಾ ಉಸ್ತಾದ್‌ರ ಅಧ್ಯಕ್ಷತೆಯಲ್ಲಿ ಸುನ್ನಿ ಮಹಾ ಸಮ್ಮೇಳನ ನಡೆಯಲಿದೆ. ಕಾಸರಗೋಡು ಖಾಝಿ ಟಿ.ಕೆ.ಎಂ. ಬಾವಾ ಮುಸ್ಲಿಯಾರ್ ದುವಾಗೈಯಲಿದ್ದು, ಝೈನುಲ್ ಉಲಮಾ ಚೆರುಶ್ಶೇರಿ ಉಸ್ತಾದ್ ಉದ್ಘಾಟನಾ ಭಾಷಣ ಮಾಡಲಿದ್ದಾರೆ.
ಸಮಸ್ತದ ಕರ್ನಾಟಕ ಮುಶಾವರ ಅಧ್ಯಕ್ಷ ಸೆಯ್ಯದ್ ಝೈನುಲ್ ಆಬಿದೀನ್ ತಂಙಳ್ ಸ್ವಾಗತಿಸಲಿದ್ದು, ಸಮಸ್ತ ಕೇಂದ್ರ ಮುಶಾವರದ ಕಾರ್ಯದರ್ಶಿ ಕೋಟುಮಲ ಬಾಪು ಮುಸ್ಲಿಯಾರ್, ಅಬ್ದುಸ್ಸಮದ್ ಪೂಕೋಟೂರು, ರಹ್ಮತುಲ್ಲಾ ಖಾಸಿಮಿ ಮುತ್ತೇಡಂ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಜಮಾಲುದ್ದೀನ್ ಫೈಝಿ ತುಂಬೆ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಎ.ಕೆ. ದಾರಿಮಿ ಕುಕ್ಕಿಲ ಮೊದಲಾದವರು ಉಪಸ್ಥಿತರಿದ್ದರು.
No comments:
Post a Comment